ರೋಟರಿ
ಅಂತಾರಾಷ್ಟ್ರೀಯ ಸೇವಾ ಸಂಸ್ಥೆ. ಈ ಸಂಸ್ಥೆಯನ್ನು 1905 ಫೆಬ್ರವರಿ 23ರಂದು ಶಿಕಾಗೋನಲ್ಲಿ ಪಾಲ್ ಹ್ಯಾರಿಸ್ ಮತ್ತು ಅವನ ಸಂಗಡಿಗರಾದ ಸಿಲ್ವೆಸ್ಟರ್ ಶೀಲೆ, ಗುಸ್ಟಾವಸ್ ಲೊಹ್ರೆ ಹಾಗೂ ಶೋರೆ ಹುಟ್ಟುಹಾಕಿದರು. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಇದು ಇಂದು ಪ್ರಪಂಚದಾದ್ಯಂತ ಬೆಳೆದಿದೆ. ಇಂದು ಇದು ಜಗತ್ತಿನ 166 ದೇಶಗಳಲ್ಲಿ 35ಕ್ಕಿಂತಲೂ ಹೆಚ್ಚು ಭಾಷೆಯನ್ನಾಡುವ ಜನ ಸಮಾಜದಲ್ಲಿ 1.22 ದಶಲಕ್ಷ ಸದಸ್ಯತ್ವವನ್ನು ಹೊಂದಿದೆ. ಇದರಲ್ಲಿ ಪುರುಷರ ಹಾಗೂ ಮಹಿಳೆಯರ ಸಾಮೂಹಿಕ ಸಹಭಾಗಿತ್ವವಿದೆ. ಸದ್ಯದಲ್ಲಿಯೆ ನೂರು ವರ್ಷಗಳನ್ನು ಆಚರಿಸಲಿರುವ ಈ ಸಂಸ್ಥೆ ಮಾನವ ಹಿತವನ್ನು ಮುಖ್ಯ ಧ್ಯೇಯವನ್ನಾಗಿ ಹೊಂದಿದೆ. ಭಾರತದಲ್ಲಿ ಏಷ್ಯ ಖಂಡದ ಮೊತ್ತಮೊದಲ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಕಲ್ಕತ್ತ (ಕೊಲ್ಕತ್ತ)ದಲ್ಲಿ ಇದು ತನ್ನ ಶಾಖೆಯನ್ನು ಆರಂಭಿಸಿತು (1919-20). ಪ್ರಸ್ತುತ ಪ್ರಪಂಚಾದ್ಯಂತ ಈ ಸಂಸ್ಥೆಯ 32,000 ಶಾಖೆಗಳಿವೆ.

ವಿಶ್ವಾಸ, ಸ್ನೇಹ, ಪರಂಪರೆ, ಸಂಸ್ಕøತಿ, ಜೀವನ ಮೌಲ್ಯ, ನೈತಿಕಮಟ್ಟ, ಪ್ರಾಮಾಣಿಕತೆ, ಸೌಹಾರ್ದ ಮುಂತಾದ ಅಂಶಗಳನ್ನು ಆದರ್ಶವಾಗಿಟ್ಟು ಕೊಂಡ ಈ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಿ, ಸಾಮಾಜಿಕ ಸೇವಾ ಕಾರ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಪಂಚ ಶಾಂತಿಗಾಗಿ ಪ್ರಯತ್ನಿಸುತ್ತಿದೆ.

ಜನರ ಆರೋಗ್ಯದ ಬಗ್ಗೆಯೂ ಇದು ಕಾಳಜಿ ವಹಿಸಿದೆ. ಪೋಲಿಯೋ ಮುಕ್ತ ಮಾನವ ಸಮಾಜ ನಿರ್ಮಾಣದ ದಿಸೆಯಲ್ಲಿ ಇದು ಅಗಾಧ ಯಶಸ್ಸು ಗಳಿಸಿದೆ. 2005ರ ವೇಳೆಗೆ ಎಲ್ಲ ದೇಶಗಳಲ್ಲಿಯೂ ಪೋಲಿಯೋ ರೋಗ ನಿರ್ಮೂಲನಾ ಕಾರ್ಯ ಯೋಜನೆಯನ್ನು ಪೂರ್ಣಗೊಳಿಸಲು (1985) ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಇಷ್ಟೇ ಅಲ್ಲದೆ ಶಿಕ್ಷಣ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ವೃತ್ತಿ ಧರ್ಮ, ವೃತ್ತಿಮೂಲಕ ಸೇವೆ, ರಕ್ತ ನಿಧಿ ಸ್ಥಾಪನೆ, ಆಸ್ಪತ್ರೆಗಳ ನಿರ್ಮಾಣ, ಯುವಶಕ್ತಿಗೆ ಮಾರ್ಗದರ್ಶನ, ಅಂತಾರಾಷ್ಟ್ರೀಯ ತಿಳಿವಳಿಕೆ ಮತ್ತು ವಿಶ್ವಾಸ ಬೆಳೆಯಲು ಸಮಂಜಸ ಕಾರ್ಯಗಳ ಅನುಸರಣೆ ಈ ಸಂಸ್ಥೆಯ ಧ್ಯೇಯಗಳಾಗಿವೆ. ಬಡತನ ನಿರ್ಮೂಲನೆ ಸಂಸ್ಥೆಯ ಮತ್ತೊಂದು ಮುಖ್ಯ ಗುರಿ. ಈ ಸಂಸ್ಥೆಯ ಸದಸ್ಯತ್ವಕ್ಕೆ ಕೆಲವು ನಿಯಮಗಳಿವೆ. ಸದಸ್ಯತ್ವ ಬಯಸುವ ಮಹಿಳೆ ಅಥವಾ ಪುರುಷ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿರಬೇಕು; ಉದ್ಯೋಗ ಕ್ಷೇತ್ರದಲ್ಲಿ ಖ್ಯಾತಿವಂತರಾಗಿರಬೇಕು, ಇತರರಿಗೆ ಮಾರ್ಗದರ್ಶನ ಮಾಡುವಂತಿರಬೇಕು. ಪ್ರತಿ ವರ್ಷ ಜುಲೈ 1 ರಂದು ಪ್ರಪಂಚದಾದ್ಯಂತ ರೋಟರಿ ಪದಗ್ರಹಣ ಅಥವಾ ಪದವಿ ಪ್ರದಾನ ಸಮಾರಂಭಗಳು ನಡೆಯುತ್ತವೆ.

ಚುನಾಯಿತ ಪ್ರತಿನಿಧಿಗಳಿಗೆ ಈ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಇರುತ್ತದೆ. ಪ್ರತಿವರ್ಷ ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷರು ಒಂದು ಘೋಷಣೆಯನ್ನು ಹೊರಡಿಸಿ, ಇದರ ಮಹತ್ತ್ವವನ್ನು ತಿಳಿಸಿ ಸದಸ್ಯರು ಇದನ್ನು ಕಾರ್ಯರೂಪಕ್ಕೆ ತರುವಂತೆ ಪ್ರೇರೇಪಿಸುತ್ತಾರೆ. ಇಂದಿನ ದಿನಗಳಲ್ಲಿ ಮಾನವ ಅಗತ್ಯಗಳ ಅಗಾಧತೆ ಎಷ್ಟಿದೆ ಎಂಬುದನ್ನು ಸಂಸ್ಥೆಯ ದಶಮಾನಗಳ ಸೇವೆ ತೋರಿಸುವ ಯತ್ನ ಮಾಡಿದೆ. ಆಹಾರ, ನೀರಿನಂಥ ಪ್ರಾಥಮಿಕ ಅಗತ್ಯಗಳು, ನೈರ್ಮಲ್ಯ, ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಮುಂತಾದ ವಿಷಯಗಳಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಮಾದರಿಯಾಗಿದೆ. ರಾಯಭಾರಿಗಳು, ವಿದ್ವಾಂಸರು, ಯುವಕರಿಗಾಗಿಯೇ ಮಾಡಿರುವ ರೋಟರ್ಯಾಕ್ಟ್, ಇಂಟರ್ ಆ್ಯಕ್ಟ್, ಯುವ ವಿನಿಮಯ, ಜಿ.ಎಸ್.ಇ ಮುಂತಾದುವು ಸಂಸ್ಥೆಯ ವಿವಿಧ ಉದ್ದೇಶಗಳನ್ನು ಈಡೇರಿಸುವ ಅಂಗಗಳಾಗಿವೆ. ಶತಮಾನೋತ್ಸವದ ಸಂದರ್ಭದಲ್ಲಿ ಕ್ರಿಯಾಶೀಲರಾದ ಹಾಗೂ ಸೇವಾ ಬದ್ಧರಾದ ರೋಟರಿ ಸದಸ್ಯರುಗಳನ್ನು ಉಳಿಸಿಕೊಳ್ಳುವ ಮತ್ತು ಅಂಥ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಈ ಸಂಸ್ಥೆ ತನ್ನ ಭವಿಷ್ಯದ ಭದ್ರತೆಗೆ ಪ್ರಯತ್ನಗಳನ್ನು ಮಾಡುತ್ತಿದೆ. ದಿ ರೊಟರಿಯನ್ ಎಂಬುದು ಈ ಸಂಸ್ಥೆಯ ಅಧಿಕೃತ ನಿಯತಕಾಲಿಕೆ. ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಧಾನ ಕಚೇರಿ ಇಲಿನಾಯ್ಸ್‍ನ ಇವಾನ್‍ಸ್ಟನ್‍ನಲ್ಲಿದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	 
(ವಿ.ಸಿ.)